ನ್ಯೂ ಕ್ಯಾಲೆಡೋನಿಯ  -
	ನೈಋತ್ಯ ಫೆಸಿಫಿಕ್ ಸಾಗರದಲ್ಲಿರುವ ಫ್ರೆಂಚ್ ಸಾಗರಾಂತರ ಪ್ರದೇಶ; ಆ ಪ್ರದೇಶದ ಅತ್ಯಂತ ದೊಡ್ಡ ದ್ವೀಪ. ಇತರ ದ್ವೀಪಗಳು ಬೆಲೆಪ್, ಪಿನ್ಸ್, ಲಾಯಲ್ಟಿ, ಹ್ಯೂವನ್, ಚೆಸ್ಟರ್ಫೀಲ್ಡ್, ವಾಲ್ಪೋಲ್ ಮತ್ತು ಹಂಟರ್. ನ್ಯೂ ಕ್ಯಾಲೆಡೋನಿಯ ದ್ವೀಪ ಆಸ್ಟ್ರೇಲಿಯದ ಪೂರ್ವಕ್ಕೆ 1200ಕಿ.ಮೀ. ದೂರದಲ್ಲಿದೆ. 397ಕಿ.ಮೀ. ಉದ್ದ, 50ಕಿ.ಮೀ. ಅಗಲವಿರುವ ಮುಖ್ಯ ದ್ವೀಪ ನ್ಯೂ ಕ್ಯಾಲೆಡೋನಿಯದ ಭೂವಿಸ್ತೀರ್ಣ 16,749ಚ.ಕಿ.ಮೀ. ಇದಕ್ಕೆ ಸೇರಿದ ಇತರೇ ದ್ವೀಪಗಳ ವಿಸ್ತೀರ್ಣ 2330 ಚ.ಕಿ.ಮೀ. ಇದ್ದು ಇದರ ಒಟ್ಟು ವಿಸ್ತೀರ್ಣ 19079 ಚ.ಕಿ.ಮೀ. ಎಲ್ಲಾ ದ್ವೀಪಗಳನ್ನು ಸೇರಿಸಿ ಇದರ ಒಟ್ಟು ಜನಸಂಖ್ಯೆ ಸು. 1,97,000 (2001).  ರಾಜಧಾನಿ ನೂಮೇಯ; ಇದು ನ್ಯೂ ಕ್ಯಾಲೆಡೋನಿಯ ದ್ವೀಪದಲ್ಲಿದೆ.

	ಇಲ್ಲಿಯದು ಉಪೋಷ್ಣವಲಯದ ವಾಯುಗುಣ. ಡಿಸೆಂಬರ್-ಮಾರ್ಚ್‍ನಲ್ಲಿ ಅತ್ಯಧಿಕ ಮಳೆಯಾಗುತ್ತದೆ. ಎತ್ತರವಾದ ದ್ವೀಪಗಳಲ್ಲಿ ಪೂರ್ವತೀರದಲ್ಲಿ ವಾಣಿಜ್ಯ ಮಾರುತಗಳ ಪ್ರಭಾವದಿಂದ ಹೆಚ್ಚು ಮಳೆಯಾಗುತ್ತದೆ. ಉನ್ನತ ದ್ವೀಪಗಳು ಭೂವೈಜ್ಞಾನಿಕವಾಗಿ ಹೆಚ್ಚು ಸಂಕೀರ್ಣವಾದವು. ಬಹುತೇಕ ದ್ವೀಪಗಳಲ್ಲಿ ತೆಂಗಿನ ಮರಗಳಿವೆ. ಹಕ್ಕಿಗಳುಂಟು. ನೆಲದ ಮೇಲಣ ಪ್ರಾಣಿವರ್ಗ ಕಡಿಮೆ.

	ನ್ಯೂ ಕ್ಯಾಲೆಡೋನಿಯ 1946ರಲ್ಲಿ ಫ್ರೆಂಚ್ ಸಾಗರೋತ್ತರ ಪ್ರದೇಶವಾಯಿತು. ಫ್ರಾನ್ಸಿನಿಂದ ನೇಮಕವಾದ ಗವರ್ನರ್ ಈ ಪ್ರದೇಶದ ಆಡಳಿತ ಮುಖ್ಯ. ಇವನ ನೆರವಿಗೆ ಐವರ ಮಂಡಲಿಯಿರುತ್ತದೆ. ಈ ಪ್ರದೇಶದಿಂದ ಫ್ರೆಂಚ್ ರಾಷ್ಟ್ರೀಯ ಸಭೆಯಲ್ಲೂ ಸೇನೇಟಿನಲ್ಲೂ ಒಬ್ಬೊಬ್ಬ ಸದಸ್ಯನಿರುತ್ತಾನೆ. 

	ನ್ಯೂ ಕ್ಯಾಲೆಡೋನಿಯ ದ್ವೀಪಗಳಲ್ಲಿ ಅನೇಕ ಖನಿಜಗಳಿವೆ. ನಿಕಲ್, ಕಬ್ಬಿಣ ಅದುರು, ಕ್ರೋಮ್, ಕೋಬಾಲ್ಟ್, ಮ್ಯಾಂಗನೀಸ್ ಮುಂತಾದವುಗಳ ನಿಕ್ಷೇಪಗಳಿವೆ. ನಿಕಲ್ ಮತ್ತು ಕಬ್ಬಿಣ ಅದುರು ರಫ್ತಾಗುತ್ತವೆ. ನ್ಯೂ ಕ್ಯಾಲೆಡೋನಿಯದ ಪಶ್ಚಿಮದ ಹುಲ್ಲುಗಾವಲುಗಳಲ್ಲಿ ದನ ಸಾಕುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗಳಲ್ಲಿ ಆಸ್ಟ್ರೇಲಿಯ ಮತ್ತು ನ್ಯೂ ಜಿûೀಲೆಂಡ್‍ಗಳವರೇ ಅಧಿಕ.

	ಈ ದ್ವೀಪದ ತೀರವನ್ನು ಹವಳದ ದಿಬ್ಬ ಸುತ್ತುವರಿದಿದೆ. ಎದು ಜಗತ್ತಿನಲ್ಲೇ ಎರಡನೆಯ ಅತ್ಯಂತ ಉದ್ದವಾದ ಹವಳದ ದಿಬ್ಬ (ಮೊದಲನೆಯಾದು ಆಸ್ಟ್ರೇಲಿಯದ್ದು). ದ್ವೀಪದ ಮಧ್ಯಭಾಗದಲ್ಲಿ ಪರ್ವತಶ್ರೇಣಿಗಳಿವೆ. ಅತ್ಯುನ್ನತ ಶಿಖರ ಪ್ಯಾನ್ಯೇ (1,650 ಮೀ.). ಈ ದ್ವೀಪದ ಭೂರಚನೆ ಸಂಕೀರ್ಣವಾದ್ದು. ಇಲ್ಲಿಯದು ಉಪೋಷ್ಣವಲಯ ವಾಯುಗುಣ. ಮಾಧ್ಯಮಾಸಿಕ ಉಷ್ಣತೆ 17(ಛಿ ನಿಂದ 32(ಛಿವರೆಗೆ ವ್ಯತ್ಯಾಸವಾಗುತ್ತದೆ. ಡಿಸೆಂಬರ್‍ನಿಂದ ಮಾರ್ಚ್ ವರೆಗೆ ಹೆಚ್ಚು ಮಳೆ ಬೀಳುತ್ತದೆ. ವಾಣಿಜ್ಯ ಮಾರುತುಗಳ ಪ್ರಭಾವಕ್ಕೆ ಒಳಗಾದ ಪೂರ್ವತೀರದಲ್ಲಿ ಬೀಳುವ ವಾರ್ಷಿಕ ಮಳೆ 2,000 ಮಿಮೀ. ಪಶ್ಚಿಮ ತೀರಲ್ಲಿ 1,000 ಮಿಮೀ.ಗಿಂತ ಕಡಿಮೆ. ಪೂರ್ವತೀರದಲ್ಲೂ ಕೆಲವು ಕಣಿವೆಗಳಲ್ಲೂ ಕಾಡುಗಳಿವೆ. ಪಶ್ಚಿಮದಲ್ಲಿ ಸವಾನಗಳಿವೆ. ಮರಗಳ ಪೈಕಿ ಕರಿಗೇರು ಮತ್ತು ಆರಕೇರಿಯ ಸಾಮಾನ್ಯ. ಹಕ್ಕಿಗಳು ಮತ್ತು ಮೀನುಗಳನ್ನು ಬಿಟ್ಟರೆ ಇತರ ಪ್ರಾಣಿಸಂಪತ್ತು ವಿರಳ.

	ಈ ದ್ವೀಪವನ್ನು ಮೊದಲ ಬಾರಿ ಕಂಡ (1774) ಐರೋಪ್ಯ ಜೇಮ್ಸ್ ಕುಕ್. ಈತ ಬ್ರಿಟಿಷ್ ನಾವಿಕ. ಅವನು ಇದಕ್ಕೆ ಸ್ಕಾಟ್ಲೆಂಡಿನ ರೋಮನ್ ಹೆಸರಾದ ಕ್ಯಾಲೆಡೋನಿಯ ಎಂದು ನಾಮಕರಣ ಮಾಡಿದ. ಇಲ್ಲಿ 1843ರಲ್ಲಿ ಫ್ರೆಂಚ್ ರೋಮನ್ ಕ್ಯಾತೊಲಿಕ್ ಪ್ರಚಾರ ಮಂಡಲಿಯೊಂದು ಸ್ಥಾಪಿತವಾಯಿತು. ಫ್ರಾನ್ಸ್ ಈ ದ್ವೀಪವನ್ನು 1853ರಲ್ಲಿ ವಶಪಡಿಸಿಕೊಂಡಿತು. 1864 ರಿಂದ 1894ರ ವರೆಗೆ ಇಲ್ಲಿಗೆ ಅಪರಾಧಿಗಳನ್ನು ಗಡಿಪಾರು ಮಾಡಲಾಗುತ್ತಿತ್ತು. ಈ ಕಾಲದಲ್ಲಿ ಸ್ಥಳೀಯರು ದಂಗೆಯೇಳಲು ಹಲವು ಬಾರಿ ಯತ್ನಿಸಿದರು. 1946ರಲ್ಲಿ ನ್ಯೂ ಕ್ಯಾಲೆಡೋನಿಯ ದ್ವೀಪವೂ ಸೇರಿದಂತೆ ಇಡೀ ದ್ವೀಪ  ಸಮುದಾಯ ಪ್ರದೇಶವನ್ನು ಫ್ರೆಂಚ್ ಸಾಗರೋತ್ತರ ಆಡಳಿತ ಪ್ರದೇಶವಾಗಿಮಾಡಲಾಯಿತು.

	ದ್ವೀಪದ ಹಾಗೂ ಪ್ರದೇಶದ ಪ್ರಮುಖ ಪಟ್ಟಣ, ಬಂದರು ಹಾಗೂ ರಾಜಧಾನಿ ನೂಮೇಯ. ಎದು ದ್ವೀಪದ ನೈಋತ್ಯ ತೀರದಲ್ಲಿದೆ. ದ್ವೀಪದ ಪ್ರಮುಖ ಕೃಷಿ ಉತ್ಪನ್ನಗಳು ಆಲೂಗಡ್ಡೆ, ಗೆಣಸು, ಟಾರೋ, ಮುಸುಕಿನ ಜೋಳ, ಕೊಬ್ಬರಿ ಮತ್ತು ಕಾಫಿ ಮತ್ತು ಕೊಬ್ಬರಿ ಮುಖ್ಯ ರಫ್ತುಗಳು. ದ್ವೀಪದಲ್ಲಿ 2,720 ಕಿಮೀ.ಗಳಿಗೂ ಹೆಚ್ಚು ಉದ್ದದ ರಸ್ತೆಗಳಿವೆ. ಆಸ್ಟ್ರೇಲಿಯ ಮತ್ತು ಅಮೆರಿಕದಿಂದ ವಿಮಾನಸಂಚಾರವಿದೆ.
(ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ